ಟೈಮ್ -
ಅಮೆರಿಕದ ನ್ಯೂಯಾರ್ಕಿನಿಂದ ಪ್ರಕಟವಾಗುತ್ತಿರುವ ಅಂತರರಾಷ್ಟ್ರೀಯ ವಾರಪತ್ರಿಕೆ. 1923ರ ಮಾರ್ಚ್‍ನಲ್ಲಿ ಆರಂಭವಾಯಿತು. ತನ್ನದೇ ಆದ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಈ ಪತ್ರಿಕೆ ಪ್ರಸಿದ್ಧವಾಗಿದೆ.
ಆರಂಭದಿಂದಲೇ ಓದುಗರನ್ನು ಸೆಳೆದ ಈ ನಿಯತಕಾಲಿಕದ ಸ್ಥಾಪಕರು ಹೆನ್ರಿ ಆರ್. ಲೂಸ್ (1898-1967) ಮತ್ತು ಬ್ರಿಟನ್ ಹ್ಯಾಡೆನ್ (1898-1929); ಬ್ಯಾಲ್ಟಿಮೋರ್ ನ್ಯೂಸ್ ಪತ್ರಿಕೆಯಲ್ಲಿ ವರದಿಗಾರರಾಗಿ ಪಳಗಿದವರು. ಒಂದನೆಯ ಮಹಾಯುದ್ಧದ ಅನಂತರ ಕಾಲದಲ್ಲಿ ಓದುಗರ ಕುತೂಹಲ ಮತ್ತು ಹೊಸ ಅಭಿರುಚಿಯನ್ನು ಇದು ಪೊರೈಸತೊಡಗಿತು.

	ವಾರದ ಸುದ್ದಿಯನ್ನು ವ್ಯವಸ್ಥಿತವಾಗಿ ವಿಭಾಗಿಸಿ, ಸಂಗ್ರಹಿಸಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕೊಡುವುದು ಆರಂಭದಿಂದಲೂ ಇದರ ಉದ್ದೇಶ. ಹ್ಯಾಡೆನ್ ನಿಧನ ಹೊಂದಿದಾಗ (1929) ಪತ್ರಿಕೆಯ ಪ್ರಸಾರ ಎರಡು ಲಕ್ಷ. ಅನಂತರ ಲೂಸ್ ಒಬ್ಬರೇ ದಕ್ಷತೆಯಿಂದ ಪತ್ರಿಕೆ ನಡೆಸಿದರು. ವಾಣಿಜ್ಯ ವ್ಯವಹಾರಕ್ಕೆ ಮೀಸಲಾದ ಫಾರ್ಚೂನ್ ಪತ್ರಿಕೆಯನ್ನು 1930 ರಲ್ಲಿ ಸ್ಥಾಪಿಸಿದರು. ಸೋದರ ಸಚಿತ್ರನಿಯತಕಾಲಿಕ ಲೈಫ್ ಪತ್ರಿಕೆ 1936ರಲ್ಲಿ ಆರಂಭವಾಗಿ ಸ್ವಲ್ಪಕಾಲದಲ್ಲೇ ತುಂಬ ಜನಪ್ರಿಯತೆ ಗಳಿಸಿತು.

	ಎರಡನೆಯ ಮಹಾಯುದ್ಧದ ಕಾಲದಲ್ಲಿ ಯುದ್ಧ ಬಾತ್ಮೀದಾರರ ದೊಡ್ಡ ತಂಡವೊಂದು ಟೈಮ್ ಪತ್ರಿಕೆಗೆ ಇತ್ತು. ಇವರಲ್ಲಿ ಅನೇಕ ಮಂದಿ ಮಹಿಳಾ ಬಾತ್ಮೀದಾರರೂ ಇದ್ದರು. ಮಾರ್ಗರೇಟ್ ಬೋರ್ಕ್ ವೈಟ್ ಟ್ಯುನಿಷಿಯದಲ್ಲಿ ಟೈಮ್ ಮತ್ತು ಲೈಫ್ ಪತ್ರಿಕೆಗಳಿಗೆ ದುಡಿದ ವಿಖ್ಯಾತ ಛಾಯಾಚಿತ್ರಗಾರ್ತಿ; ಬಾಂಬ್ ದಾಳಿ ನೆಡೆದಾಗ ವಿಮಾನದಲ್ಲಿದ್ದ ಮೊದಲ ಪತ್ರಕರ್ತೆ. ಟೈಮ್ ಪತ್ರಿಕೆಯ ಪ್ರಸಿದ್ಧ ಯುದ್ಧಬಾತ್ಮೀದಾರರ ಮೆಲ್‍ವಿಲ್ ಜಾಕೋಬಿ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೆ ಈಡಾದರು.

	ಒಬ್ಬನಿಂದ ಒಬ್ಬನಿಗಾಗಿ ಬರೆಯಲಾದ ಪತ್ರಿಕೆ, ಎಂಬುದು ಟೈಮ್‍ನ ಅಗ್ಗಳಿಕೆ. ರಾಷ್ಟ್ರವ್ಯವಹಾರ, ವಿದೇಶೀ ಸುದ್ದಿ, ವಿಜ್ಞಾನ, ಧರ್ಮ, ವಾಣಿಜ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ. ನುರಿತವರು ವಿಶಿಷ್ಟ ಶೈಲಿಯಲ್ಲಿ ಬರೆದ ಪಾಂಡಿತ್ಯಪೂರ್ಣ ಲೇಖನಗಳು ಓದುಗರಿಗೆ ಆಕರ್ಷಕವಾಗಿವೆ. ಆದರೆ ಸುದ್ದಿಗೆ ತನ್ನ ಅಭಿಪ್ರಾಯವನ್ನು ಸೇರಿಸಿ ಸತ್ಯವನ್ನು ಇದು ವಿಕೃತಗೊಳಿಸುತ್ತದೆಂಬ ಟೀಕೆಯೂ ಉಂಟು.

	ಈ ಪತ್ರಿಕೆಯ ರಕ್ಷಾಪುಟದಲ್ಲಿ ಅನೇಕ ರಾಷ್ಟ್ರನಾಯಕರ, ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳ ಹಾಗೂ ವಿಶಿಷ್ಟ ಕ್ಷೇತ್ರಗಳಲ್ಲಿ ಖ್ಯಾತರಾದವರ ಚಿತ್ರಗಳು ಪ್ರಕಟವಾಗುತ್ತವೆ. ರಕ್ಷಾಪುಟದ ಚಿತ್ರವನ್ನು ಕುರಿತ ವಿಶೇಷ ಲೇಖನ ಒಳ ಪುಟಗಳಲ್ಲಿ ಇರುತ್ತದೆ. ಮಹಾತ್ಮ ಗಾಂಧಿ, ಜವಾಹರಲಾಲ ನೆಹರೂ, ಇಂದಿರಾ ಗಾಂಧಿ ಮುಂತಾದವರ ಚಿತ್ರಗಳು ಟೈಮ್ ಪತ್ರಿಕೆಯ ರಕ್ಷಾಪುಟದಲ್ಲಿ ಪ್ರಕಟವಾಗಿವೆ.

	ನ್ಯೂ ಯಾರ್ಕ್ ನಗರದಲ್ಲಿ ಈ ಪತ್ರಿಕೆಗೆ 48 ಅಂತಸ್ತುಗಳ ಭವ್ಯ ಕಟ್ಟಡವುಂಟು. ಸ್ವಂತ ರೇಡಿಯೋ ಮತ್ತು ಟೆಲಿವಿಷನ್ ಪ್ರಸಾರ ಕೇಂದ್ರಗಳೂ ಇವೆ. ಅನೇಕ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಸಾಗರೋತ್ತರ ಆವೃತ್ತಿಗಳನ್ನು ಪ್ರಕಟಿಸುತ್ತಿದೆ.							
(ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ